25/Oct/2015 ಊರಲೆಲ್ಲಾ ಬೊಂಬೆ ಹಬ್ಬದ ಸಡಗರ ಶುರುವಿಟ್ಟಿತ್ತು. ಲಕ್ಷಣವಾಗಿ ಮೆಟ್ಟಿಲು ಮೆಟ್ಟಿಲಾಗಿ ಬೊಂಬೆಗಳನ್ನು ಕೂರಿಸಿ, ಕಲಶವಿಟ್ಟು ಸಂಭ್ರಮಿಸದೆ ‘ ನಿನ್ನ ಕೈಲಾಡೋ ಬೊಂಬೆ ನಾನಯ್ಯ. . .ತಾನೋ ತಂದಾನೋ ತಾನೊ. . .’ ಅಂತ ಊರು ಸುತ್ತಲು ಹೊರಟವಳನ್ನು ಈ ಬಾರಿ ಸ್ವಾಗತಿಸಿದ್ದು ಹಿಮಾಚಲಪ್ರದೇಶದಲ್ಲಿ ಇರುವ ಧರ್ಮಶಾಲ ಎನ್ನುವ ಪುಟ್ಟ ಗಿರಿಧಾಮ. ಇಲ್ಲಿನ ಜನ ‘ತಲ್ಲಣಿಸದಿರು ಕಂಡ್ಯ ತಾಳು ಮನವೇ, ಎಲ್ಲರನು ಸಲಹುವನು ಇದಕೆ ಸಂಶಯ ಬೇಡ’ ಎನ್ನುವ ಕನಕೋಕ್ತಿಯನ್ನು ಅಕ್ಷರಶಃ ಬದುಕುತ್ತಿದ್ದಾರೆ. ನಾಳಿನ ಬಗ್ಗೆ ಆತಂಕ, ಹಿಂದಿನವನೊಡನೆ ಜಂಜಾಟ, ಮುಂದಿನವನೊಡನೆ ಕಾದಾಟ, ಏಣಿಯೇರುವ ಆಕಾಂಕ್ಷೆಗಳ ಭರಾಟೆ ಏನೊಂದೂ ಕಂಡುಬಾರದ ಇಲ್ಲಿನ ಜನರೊಳಗಿನ ಶಾಂತಿಯನ್ನು ಆಸ್ವಾದಿಸುತ್ತಲೇ ಒಂದು ಹದಿನೈದು ಕಿಲೋಮೀಟರ್ಗಳಷ್ಟು ಬೆಟ್ಟ ಹತ್ತಿ, ಕಣಿವೆಯೊಳಗೆ ತೂರಿ, ಹಸಿರು ಪ್ರಪಾತವನ್ನು ಕಂಡು ಪುಂಗಿ ನಾದದಂತೆ ಬಾಗಿದರೆ, ಹಾವಿನಂತೆ ಹೊರಳಿ ಬಿಟ್ಟರೆ ಸಿಗುತ್ತೆ ಮೆಕ್ಲಿಯಾಡ್ ಗಂಜ್ ಎನ್ನುವ ಪ್ರಶಾಂತಿ ಧಾಮ. ಅಲ್ಲಿಯೇ ಇದೆ ‘ನ್ಯಾಂಗಲ್ ಬೌದ್ಧ ಮಂದಿರ’. ಇಲ್ಲಿ ವಾಸವಿರುವುದು ಹದಿನಾಲ್ಕನೆಯ ಬೌದ್ಧಗುರು ಇಂದಿನ ದಲೈ ಲಾಮ ಅವರು. ಇವರ ನಿಜ ನಾಮಧೇಯ ತೆಂಡ್ಜಿನ್ ಗ್ಯಾಟ್ಸೋ ಎಂದು. ದಲೈ ಲಾಮ ಪರಂಪರೆಗೆ 500 ವರ್ಷಗಳ ಇತಿಹಾಸವಿದೆ. ಆದರೆ ಅದರ ಮುಖ್ಯಸ್ಥಾನ ಭಾರತಕ್ಕೆ ಸ್ಥಳಾಂತರಗೊಂಡಿದ್ದು ಮಾತ್ರ 1959ರಲ್ಲಿ ಇದೇ ನ್ಯಾಂಗಲ್ ಬೌದ್ಧ ಮಂದಿರಕ್ಕೆ. ಇದು ದ...