Dalai Lama a droplet of divinity!

25/Oct/2015

ಊರಲೆಲ್ಲಾ ಬೊಂಬೆ ಹಬ್ಬದ ಸಡಗರ ಶುರುವಿಟ್ಟಿತ್ತು.  ಲಕ್ಷಣವಾಗಿ ಮೆಟ್ಟಿಲು ಮೆಟ್ಟಿಲಾಗಿ ಬೊಂಬೆಗಳನ್ನು ಕೂರಿಸಿ, ಕಲಶವಿಟ್ಟು ಸಂಭ್ರಮಿಸದೆ ‘ ನಿನ್ನ ಕೈಲಾಡೋ ಬೊಂಬೆ ನಾನಯ್ಯ. . .ತಾನೋ ತಂದಾನೋ ತಾನೊ. . .’ ಅಂತ ಊರು ಸುತ್ತಲು ಹೊರಟವಳನ್ನು ಈ ಬಾರಿ ಸ್ವಾಗತಿಸಿದ್ದು ಹಿಮಾಚಲಪ್ರದೇಶದಲ್ಲಿ ಇರುವ ಧರ್ಮಶಾಲ ಎನ್ನುವ ಪುಟ್ಟ ಗಿರಿಧಾಮ.

ಇಲ್ಲಿನ ಜನ ‘ತಲ್ಲಣಿಸದಿರು ಕಂಡ್ಯ ತಾಳು ಮನವೇ, ಎಲ್ಲರನು ಸಲಹುವನು ಇದಕೆ ಸಂಶಯ ಬೇಡ’ ಎನ್ನುವ ಕನಕೋಕ್ತಿಯನ್ನು ಅಕ್ಷರಶಃ ಬದುಕುತ್ತಿದ್ದಾರೆ. ನಾಳಿನ ಬಗ್ಗೆ ಆತಂಕ, ಹಿಂದಿನವನೊಡನೆ ಜಂಜಾಟ, ಮುಂದಿನವನೊಡನೆ ಕಾದಾಟ, ಏಣಿಯೇರುವ ಆಕಾಂಕ್ಷೆಗಳ ಭರಾಟೆ ಏನೊಂದೂ ಕಂಡುಬಾರದ ಇಲ್ಲಿನ ಜನರೊಳಗಿನ ಶಾಂತಿಯನ್ನು ಆಸ್ವಾದಿಸುತ್ತಲೇ ಒಂದು ಹದಿನೈದು ಕಿಲೋಮೀಟರ್ಗಳಷ್ಟು ಬೆಟ್ಟ ಹತ್ತಿ, ಕಣಿವೆಯೊಳಗೆ ತೂರಿ, ಹಸಿರು ಪ್ರಪಾತವನ್ನು ಕಂಡು ಪುಂಗಿ ನಾದದಂತೆ ಬಾಗಿದರೆ, ಹಾವಿನಂತೆ ಹೊರಳಿ ಬಿಟ್ಟರೆ ಸಿಗುತ್ತೆ ಮೆಕ್ಲಿಯಾಡ್ ಗಂಜ್ ಎನ್ನುವ ಪ್ರಶಾಂತಿ ಧಾಮ. ಅಲ್ಲಿಯೇ ಇದೆ ‘ನ್ಯಾಂಗಲ್ ಬೌದ್ಧ ಮಂದಿರ’.

ಇಲ್ಲಿ ವಾಸವಿರುವುದು ಹದಿನಾಲ್ಕನೆಯ ಬೌದ್ಧಗುರು ಇಂದಿನ ದಲೈ ಲಾಮ ಅವರು. ಇವರ ನಿಜ ನಾಮಧೇಯ ತೆಂಡ್ಜಿನ್ ಗ್ಯಾಟ್ಸೋ ಎಂದು. ದಲೈ ಲಾಮ ಪರಂಪರೆಗೆ 500 ವರ್ಷಗಳ ಇತಿಹಾಸವಿದೆ. ಆದರೆ ಅದರ ಮುಖ್ಯಸ್ಥಾನ ಭಾರತಕ್ಕೆ ಸ್ಥಳಾಂತರಗೊಂಡಿದ್ದು ಮಾತ್ರ 1959ರಲ್ಲಿ ಇದೇ ನ್ಯಾಂಗಲ್ ಬೌದ್ಧ ಮಂದಿರಕ್ಕೆ. ಇದು ದಲೈ ಲಾಮ ಅವರುಗಳ ಖಾಸಗಿ ಮನೆ ಮತ್ತು ಮಂದಿರ. ಆದರೂ ಒಮ್ಮೊಮ್ಮೆ ಸಾರ್ವಜನಿಕ ಭೇಟಿಗೆ ಅವಕಾಶ ನೀಡಲಾಗುತ್ತದೆ. ಆಕಾಶಕ್ಕೆ ದೃಷ್ಟಿಯಾಗದಿರಲಿ ಎಂದು ಹಿರಿಯಕ್ಕ ಒಬ್ಬಳು ಇಟ್ಟ ದೃಷ್ಟಿ ಬೊಟ್ಟಿನಂತೆ ಇರುವ ಮೆಕ್ಲಿಯಾಡ್ ಗಂಜ್‍ಗೆ ಹೋದ ಮೇಲೆ ದಲೈ ಲಾಮ ಅವರನ್ನು ಭೇಟಿ ಮಾಡದೆಯೇ ಬರುವುದೆ?!

ಭೇಟಿಯ ಆಸೆ ವ್ಯಕ್ತ ಪಡಿಸಿ ಈಮೇಲ್ ಮೂಲಕ ಸಂಪರ್ಕಿಸಿದಾಗ ತಿಳಿದು ಬಂದದ್ದು ಕಳೆದ ಆರು ತಿಂಗಳುಗಳಿಂದ ಅವರು ಸಾರ್ವಜನಿಕ ಭೇಟಿಯನ್ನು ರದ್ದು ಪಡಿಸಿ ವಿಶ್ರಾಂತಿಯಲ್ಲಿ ಇದ್ದಾರೆ. ಈಗಂತೂ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದು ಇನ್ನೂ ಒಂದು ತಿಂಗಳಿನ ಕಾಲ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿರುವುದರಿಂದ ಭೇಟಿ ಸಾಧ್ಯವೇ ಇಲ್ಲ ಎನ್ನುವ ಉತ್ತರ. ನಿರಾಸೆಯನ್ನು ಇನ್ನೂ ಜಾಯಮಾ
ನಕ್ಕೆ ಒಗ್ಗಿಸಿಕೊಳ್ಳದ ನಾನು ಭರವಸೆಯ ಪ್ರವಾದಿಯಂತೆ ಪದೇ ಪದೇ ಮಿಂಚಂಚೆ ಕಳಿಸುತ್ತಿದ್ದೆ ಮತ್ತು ಫೋನ್ಫೆ ಕೂಡ ಮಾಡುತ್ತಿದ್ದೆ.  ಹತ್ತು ನಿಮಿಷಕ್ಕಿಂತ ಹೆಚ್ಚಿಗೆ ಅವರೊಡನೆ ಇರಲಾರೆ ಎನ್ನುವ ಭಾಷೆ ಇತ್ತಿದ್ದೆ. ಅವಕಾಶ ಕೊಟ್ಟರೆ ನಾಲ್ಕು ಪ್ರಶ್ನೆಗಳನ್ನು ಮಾತ್ರ ಕೇಳುತ್ತೇನೆ ಎನ್ನುವ ಪ್ರಮಾಣ ಮಾಡಿದ್ದೆ. ಇಲ್ಲಿಂದ ಹೊರಡುವ ದಿನ ಅಲ್ಲಿಂದ ಬಂದ ಕಡೆಯ ಉತ್ತರ ‘ಕ್ಷಮಿಸಿ. ವೈದ್ಯರುಗಳ ಮಾತನ್ನು ಮೀರಲಾಗದು. ನೀವು ಇಲ್ಲಿಗೆ ಬರಬಹುದು ಆದರೆ ದಲೈ ಲಾಮ ಅವರ ಭೇಟಿ ಅಸಾಧ್ಯ. ಇಲ್ಲಿಗೆ ಬಂದಾಗ ನಮಗೆ ಕರೆ  ಮಾಡಿ ನೋಡೋಣ’ ಎಂದು. ಸರಿ, ಅಲ್ಲಿ ಹೋಗಿ ಬಾಗಿಲಲ್ಲಿ ಬಿದ್ದಿಹ ಭಜಕನು ನಾನು ಎಂದು ವಿನಂತಿಸಿಕೊಳ್ಳೋಣ ಎಂದು ಹೊರಟೇ ಬಿಟ್ಟೇ. ತಲುಪಿದ ಕೂಡಲೇ ಫೋನ್ ಮಾಡಲು ಪ್ರಾರಂಭಿಸಿದೆ. ‘ಭೇಟಿ ಅಸಾಧ್ಯ’ ಎನ್ನುವುದು ಅಲ್ಲಿನ ರೆಕಾರ್ಡೆಡ್ ಸಂದೇಶವೆನ್ನುವಂತೆ ಪ್ರತಿ ಬಾರಿಯೂ ಉಸಿರುತ್ತಿತ್ತು. ಎರಡು ದಿನಗಳ ನಂತರ ಒಂದು ಎಸ್‍ಎಂಎಸ್ ಬಂತು. ‘ನಾಳೆ 11.30ಕ್ಕೆ ನ್ಯಾಂಗಲ್ ಬೌದ್ಧ ಮಂದಿರದ ಕಚೇರಿಗೆ ಬನ್ನಿ. ಬರುವಾಗ ನಿಮ್ಮ ಗುರುತಿನ ಚೀಟಿಯನ್ನು ಮರೆಯದೇ ತನ್ನಿ’ ಹೆಚ್ಚಿನ ಉದ್ವೇಗ, ಉತ್ಸಾಹ ಯಾವುದೂ ನನ್ನನ್ನು ಕಾಡಲಿಲ್ಲ. ಕಾರಣವಿಷ್ಟೆ, ಒಳ ಮನಸ್ಸು ಮೊದಲ ದಿನದಿಂದಲೂ ಈ ಭೇಟಿ ಸಾಧ್ಯವಿದೆ ಎಂದು ಗಟ್ಟಿಯಾಗಿ ಹೇಳುತ್ತಿತ್ತು. ಅದಕ್ಕೇ ಚಿತ್ತ ಸಮವಾಗಿಯೇ ಇತ್ತು.

ಚೀನಾದಂಥಾ ಚೀನಾ ದೇಶದಿಂದ ಬೆದರಿಕೆಗೆ ಒಳಗಾಗಿರುವ ಈ ಜಾಗಕ್ಕೆ ಮತ್ತು ದಲೈ ಲಾಮರಿಗೆ ಇರುವ ಭದ್ರತೆ ಊಹೆಗೂ ನಿಲುಕದ್ದು. ಇಂತಹ ಭದ್ರತಾ ಸಿಬ್ಬಂದಿಯನ್ನು ವೈಟ್ ಹೌಸ್ ಮುಂದೆಯೂ ನೋಡಿಲ್ಲ. ಕಡೆಪಕ್ಷ ಯಾವ ಬ್ರೂಸ್ಲಿ ಸಿನೆಮಾದಲ್ಲೂ ನೋಡಿದ ನೆನಪಿಲ್ಲ. ಆ ಸಿಬ್ಬಂದಿಗಳ ಎತ್ತg,À ಗಾತ್ರ ಮತ್ತು ಅವರ ಸೊಂಟಗಳಲ್ಲಿ ನೇತಾಡುತ್ತಿದ್ದ ಮೂರು ಮೂರು ಪಿಸ್ತೂಲುಗಳನ್ನು ಕಂಡೇ ನನಗೆ ಬವಳಿ ಬರುತ್ತಿತ್ತು. ಸುತ್ತಮುತ್ತಲಿನ ಪ್ರದೇಶದಲ್ಲಿ ಮೊಬೈಲ್ ನೆಟ್‍ವರ್ಕ್ ಸಿಗದಂತೆ ಜ್ಯಾಮರ್ಗಳನ್ನು ಅಳವಡಿಸಿದ್ದಾರೆ. ಗುರುತಿನ ಚೀಟಿಯ ಪರಿಶೀಲನೆ ನಡೆಸಿದ ನಂತರ ಮೈಮೇಲಿನ ಬಟ್ಟೆಯೊಂದನ್ನು ಉಳಿಸಿ ನಮ್ಮ ಬಳಿ ಇರುವ ಎಲ್ಲವನ್ನು ಅವರೇ ತೆಗೆದಿರಿಸಿಕೊಳ್ಳುತ್ತಾರೆ. ನಮ್ಮನ್ನೂ ಸ್ಕ್ಯಾನರ್ ಒಳಗೆ ತೂರಿಸಿಬಿಡುತ್ತಾರೆ. ಅಲ್ಲಿಂದ ಮುಂದೆ ಹೋದರೆ ನಮ್ಮ ವಿಳಾಸ, ವಿವರ, ಉದ್ದೇಶಗಳ ಅರ್ಜಿಯೊಂದನ್ನು ಭರ್ತಿ ಮಾಡಿಸಿಕೊಳ್ಳುತ್ತಾರೆ. ನಂತರ ಮಹಿಳಾ ಭದ್ರತಾ ಸಿಬ್ಬಂದಿಗಳು ಬಂದು ಕೋಣೆಯೊಂದಕ್ಕೆ ಕರೆದುಕೊಂಡು ಹೋಗಿ ದೇಹದ ಪ್ರತೀ ಅಂಗಕ್ಕೂ ಸ್ಕ್ಯಾನರ್ ಇಟ್ಟು ಪರೀಕ್ಷೆ ಮಾಡುತ್ತಾರೆ. ಹಾಂ, ಹೇಳುವುದು ಮರೆತೆ. ಹೀಗೆ ದಲೈ ಲಾಮ ಅವರನ್ನು ಭೇಟಿ ಮಾಡಲು ಹೋಗುವ ಮಹಿಳೆಯರು ತುಂಬು ತೋಳಿನ ಮತ್ತು ಪೂರ್ತಿ ಕಾಲಿನ ಬಟ್ಟೆಯನ್ನು ಹಾಕಿಕೊಳ್ಳಬೇಕಿರುತ್ತದೆ. ಉಡುಗೊರೆ ಕೊಡಲು ಇಷ್ಟ ಪಡುವವರು ಮೊದಲೇ ಅನುಮತಿ ಪಡೆದಿರಬೇಕಿರುತ್ತೆ ಮತ್ತು ಅದು ಏನು ಎನ್ನುವದನ್ನು ಮೊದಲೇ ಬರೆದುಕೊಡಬೇಕಿರುತ್ತದೆ. ಭದ್ರತಾ ಸಿಬ್ಬಂದಿಗಳು ಒಪ್ಪುವ ಸಾಮಗ್ರಿಗಳನ್ನು ಮಾತ್ರ ಉಡುಗೊರೆಯನ್ನಾಗಿ ಕೊಡಬಹುದಿರುತ್ತೆ. ಕೆಲವೊಮ್ಮೆ ದಲೈ ಲಾಮ ಅವರ ಕೈಗೇ ಕೊಡುವ ಅವಕಾಶ ಸಿಗಬಹುದು ಇಲ್ಲವಾದಲ್ಲಿ ಅವರ ಪರಿಚಾರಕರೇ ಉಡುಗೊರೆಯನ್ನು ತೆಗೆದುಕೊಂಡು ಪಕ್ಕಕ್ಕೆ ಇಟ್ಟುಕೊಳ್ಳುತ್ತಾರೆ. ಅಂತೂ ನನ್ನನ್ನು ಒಳಕ್ಕೆ ಬಿಟ್ಟರು. ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದ ಮೈಸೂರು ಸ್ಯಾಂಡಲ್ ಅಗರಬತ್ತಿಯ ಕಟ್ಟು ಇತ್ತು.

ಮುಂದಿನ ಕ್ಷಣದಲ್ಲಿ ಎಳೆ ಬಿಸಿಲು ಹಸಿರು ರಾಶಿಯನ್ನು ಆವರಿಸಿಕೊಂಡಿದ್ದ ಪರ್ವತದ ಏರಿನಲ್ಲಿ ಬಣ್ಣಬಣ್ಣದ ಹೂವಿನ ಗಿಡಗಳ ಜಾರಿನಲ್ಲಿ ಸ್ಥೂಪದಂತೆ ಕಾಣುವ ಮನೆಯ ಕಾಲುದಾರಿಯಲ್ಲಿ ನಿಂತಿದ್ದೆ. ವಿಶಾಲವಾದ ಹಜಾರದ ಭರ್ತೀ ಭದ್ರತಾ ಸಿಬ್ಬಂದಿಗಳಿದ್ದರು. ನಡುವಿನಲ್ಲೊಂದು ಸೋಫಾ ಇತ್ತು.  ಒಳಗೆ ಹೋಗಿ ನಿಂತ ಹತ್ತು ನಿಮಿಷಗಳಲ್ಲಿ ಕಡುಗೆಂಪು ಬಣ್ಣದ ನಿಲುವಂಗಿ ಧರಿಸಿ, ಕೇಸರಿ ಬಣ್ಣದ ಕಾಲುಚೀಲ, ಅಚ್ಚ ಕಂದು ಬಣ್ಣದ ಲೆದರ್ ಬೂಟ್ಸ್  ಹಾಕಿಕೊಂಡು, ಚೌಕಾಕಾರದ ಕಪ್ಪು ಬಣ್ಣದ ಆವರಣವಿದ್ದ ಕನ್ನಡಕ ಧರಿಸಿಕೊಂಡಿದ್ದ, ಎಂಭತ್ತು ವರ್ಷದ ದೇಹದಲ್ಲಿ  ಬೆಳಕೊಂದು ನಗುತ್ತಾ, ನಗುವೊಂದು ನಡೆದಾಡುತ್ತಾ, ಅನೂಹ್ಯ ಶಾಂತಿಯೊಂದು ಗಾಳಿಯಾಗುತ್ತಾ, ಧ್ಯಾನವೊಂದು ಪರಿಮಳವಾಗುತ್ತಾ ನನ್ನೆಡೆಗೆ ಬರುವುದು ಗೊತ್ತಾಗುತ್ತಿತ್ತು ಹಿಂದೆಯೇ ಅವರೇ ದಲೈ ಲಾಮ ಎನ್ನುವ ಅರಿವೂ ಬಂತು. ಇಹಪರದ ಪ್ರಜ್ಞೆಯಿಲ್ಲದೆ ನಿಂತುಬಿಟ್ಟೆ. ಅವರೇ ನಗುತ್ತಾ ಬಳಿಬಂದು ಕೈ ಹಿಡಿದುಕೊಂಡಾಗಲೇ ನನ್ನ ದೇಹವೂ ಬದುಕಿದ್ದು ಗೊತ್ತಾಯ್ತು. ಮುಂದಿನ ಹದಿನೈದು ನಿಮಿಷಗಳು ಅವರು ನನ್ನ ಕೈ ಬಿಡಲೇ ಇಲ್ಲ. ನಾನವರ ತೋಳಿಗೆ ಬಳ್ಳಿಯಾಗಿಬಿಟ್ಟಿದ್ದೆ ಎನ್ನುವುದು ತಿಳಿದದ್ದು ನಂತರ ಸಿಬ್ಬಂದಿಗಳು ಕೊಟ್ಟ ಫೋಟೊಗಳಿಂದ. ನೋಡಲು ಉತ್ಸಾಹದ ಚಿಲುಮೆಯಂತೆ ಪುಟಿದೇಳುತ್ತಿದ್ದ ಹಿರಿಯರು ಮಾತನಾಡಲು ಹೊರಟಾಗ ತುಂಬಾ ಬಳಲಿರುವುದು ತಿಳಿಯುತ್ತಿತ್ತು. ಮಾತಿಗೊಮ್ಮೆ ಅವರು ಬಳಸುತ್ತಿದ್ದ ‘certainly’ ಎನ್ನುವ ಪದ ಮೂರು ವರ್ಷದ ಮಗುವಿನ ಮಾತಿನಲ್ಲಿನ ದೈವೀಕತೆಯನ್ನು ಸ್ಫುರಿಸುತ್ತಿತ್ತು. ನನ್ನ ಕೈಲಿದ್ದ ಉಡುಗೊರೆಯನ್ನು ಅವರೇ ತೆಗೆದುಕೊಂಡರು. ಮಾತು ಕಳೆದುಕೊಂಡ ಮೂಕಿಯಾಗಿ ಮೌನದಲ್ಲೇ ಮಾತನಾಡುತ್ತಿದ್ದೆ. ಸಮಯ ಮುಗಿಯುತ್ತಿದೆ ಎನ್ನುವ ಸೂಚನೆ ಬಂದೊಡನೆ ಬುದ್ಧಿ ಜಾಗೃತವಾಯಿತು. ಕೇಳಬೇಕು ಎಂದು ಮೊದಲೇ ನಿರ್ಧಾರ ಮಾಡಿಟ್ಟುಕೊಂಡು ಬಂದಿದ್ದ ನಾಲ್ಕೇ ಪ್ರಶ್ನೆಗಳು ನೆನಪಿಗೆ ಬಂದವು.

ಸ್ವಚ್ಛ ಭಾರತದ ಕನಸು ನನಸು ಆಗಲು ಸಾಧ್ಯವೇ ಇಲ್ಲ ಎನ್ನುವ ಗಟ್ಟಿ ನಿರ್ಧಾರಕ್ಕೆ ಬಂದಿರುವ ನಾನು ದಲೈ ಲಾಮಾರನ್ನು ಅವರ ಅಭಿಪ್ರಾಯಕ್ಕಾಗಿ ಕೇಳಿಯೇ ಬಿಟ್ಟೆ. ಆಹಾರ ರಾಜಕೀಯದಿಂದ ಒಡೆದು ಆಳುವ ನೀತಿಯ ಬಗ್ಗೆ, ಮತಾಂತರದಿಂದಲೂ ಬಗೆಹರಿಯದ ಮಾನವ ಸಹಜ ಅಹಂ ಬಗ್ಗೆ ಮತ್ತು ಎಲ್ಲಕ್ಕೂ ಪ್ರಚಾರ ಬಯಸುವ ಮನುಷ್ಯನ ಕ್ಷುಲ್ಲಕ ಬುದ್ಧಿಯ ಬಗ್ಗೆ ಏನೇನೋ ಬಡಬಡಿಸಿದೆ. ಪ್ರಶ್ನೆಗಳು ನಾಲ್ಕು ಆದರೂ ಅವರು ಎಲ್ಲಕ್ಕೂ ನೀಡಿದ್ದು ಒಂದೊಂದೇ ಉತ್ತರ ಮತ್ತು ಒಂದೇ ಉತ್ತರ  ‘I will pray’.

ತಾಯಿಯೊಬ್ಬಳು ಮಗನನ್ನು ಬೆಳೆಸುವ ಹಾದಿಯಲ್ಲಿ ತನ್ನ ಕೈ ಮೀರಿದ ಪರಿಸ್ಥಿತಿಯಿಂದ ಅಸಹಾಯಕಳಾದರೂ ಭರವಸೆಯ ಊಟೆಯಂತೆ, ಒಳಿತಿನ ಹರಿಕಾರಳಂತೆ ದೇವರ ಕೋಣೆಯಲ್ಲಿ ತುಪ್ಪದ ದೀಪ ಬೆಳಗುತ್ತಲೋ, ಗಂಧದ ಕಡ್ಡಿ ಹಚ್ಚುತ್ತಲೋ, ಮಂತ್ರ ಪಠಿಸುತ್ತಲೋ ಗುಟ್ಟಾಗಿ ಸಲ್ಲಿಸುವ ಪ್ರಾರ್ಥನೆಯಂತೆ ಕಂಡರು ದಲೈ ಲಾಮ. ಅವರ ‘I will pray’ ಎನ್ನುವ ಉತ್ತರದಲ್ಲಿ ಎಂತಹ ಗಾಢವಾದ ಸಂದೇಶ ಅಡಗಿದೆ. ಉಚ್ಛ್ವಾಸವು ನಿಶ್ವಾಸದೆಡೆಗೆ ಕತ್ತಿ ಮಸೆಯುತ್ತಿರುವ ಈ ಕಾಲಘಟ್ಟದಲ್ಲಿ ಹರಸಿ ದಾರಿತೋರಬೇಕಾದ ಕೈಗಳೇ ನಿಶಕ್ತಗೊಂಡಿವೆ ಎಂದೆನಿಸುವ ಈ ದಿನಗಳಲ್ಲಿ, ನಮ್ಮನಮ್ಮ ವಿವೇಚನೆ ಉದ್ದೀಪನಗೊಳ್ಳಬೇಕಿದೆ. ವಿವೇಚನೆ ಎನ್ನುವುದು ಎಂದೂ individualistic ತಾನೇ?! ಸಗ್ಗಸಮಾನ ಆ ಹದಿನೈದು ನಿಮಿಷಗಳೂ ಅವರು ಹಿಡಿದುಕೊಂಡಿದ್ದ ನನ್ನ ಕೈಗಳಲ್ಲಿ ಅವರ ಅಂಗೈನ ತಣಿವು ಭರವಸೆಯ ಶಾಖವನ್ನು ತುಂಬುತ್ತಿದೆ. ಈ ಘಳಿಗೆಯಲ್ಲಿ ನನ್ನ ಪ್ರಾರ್ಥನೆಗೂ ಶಕ್ತಿ ತುಂಬುತ್ತಿದೆ ದಲೈ ಲಾಮ ಎನ್ನುವ  ನಕ್ಷತ್ರ.

Comments

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್