Adoption - ದತ್ತು ತೆಗೆದುಕೊಳ್ಳಿ

ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳಿ

ಈ ಭೂಮಂಡಲವನ್ನು ಮುಂದಿನ ಪೀಳಿಗೆಗಳು ಬಾಳುವಂತಹ ಸ್ಥಿತಿಯಲ್ಲಿ ಬಿಟ್ಟು ಹೋಗಬೇಕೆಂದರೆ ಈಗಾಗಲೇ ಕಾಡುತ್ತಿರುವ ಅನೇಕ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಅವುಗಳ ಸಮೂಹಕ್ಕೆ ಬಾಡಿಗೆ ತಾಯ್ತನ ಎನ್ನುವ ಹೊಸ ಭೂತವನ್ನು ಹಾಕುವುದು ಉಚಿತವೇ? ಮಮತೆಗಾಗಿ ಕಾತರಿಸುತ್ತಿರುವ ಮಕ್ಕಳ ಬಾಳು ಹಸನಾಗಲಿ.

: ಅಂಜಲಿ ರಾಮಣ್ಣ

ತಾಯಿ ಆಗುವ ಅನುಪಮ ಅವಕಾಶ ಮತ್ತು ಅಪರಿಮಿತ ಸಂಭ್ರಮವನ್ನು ಹೆಣ್ಣಿಗೆ ಸ್ವಂತ ಮಾಡಿಕೊಟ್ಟ ಪ್ರಕೃತಿಯನ್ನು ಇನ್ನಷ್ಟು ಪ್ರೀತಿಸುತ್ತಲೇ, ತಾಯಿ ಆಗುವುದು ಬರಿಯ ಹೆಣ್ಣಲ್ಲ ಗಂಡು ಕೂಡ ಅಪ್ಪನ ರೂಪದಲ್ಲಿ ಎನ್ನುವ ಇಂದಿನ ಸತ್ಯವನ್ನು ಅಪ್ಪಿಕೊಂಡು ಮುದ್ದಿಸಲೇಬೇಕಿದೆ.

ಬಾಡಿಗೆ ತಾಯ್ತನ ಹೊಂದುವ ಸಾಧ್ಯತೆಯನ್ನು ತೆರೆದುಕೊಟ್ಟಿದ್ದು ವಿಜ್ಞಾನದ ಅಸೀಮ ಸಾಧನೆಯೇ ಹೌದು. ಮಕ್ಕಳಿಲ್ಲದವರ ಕಣ್ಣೀರು ಒರೆಸುವ ಒಂದು ಸಾಧನ ಎಂದು ಈ ಅವಿಷ್ಕಾರವನ್ನು ಬಣ್ಣಿಸುವುದನ್ನು ಮಾತ್ರ ಒಪ್ಪಲಾಗದು.

ಭಯೋತ್ಪಾದಕರಾಗಿ ಪರಿವರ್ತಿತರಾಗುವ ಮಕ್ಕಳ ವಿಷಯದಲ್ಲಿ ವಿಯೆನ್ನಾ ದೇಶದಲ್ಲಿರುವ ವಿಶ್ವ ಸಂಸ್ಥೆಯ ಕೇಂದ್ರದಲ್ಲಿ ವಿಶೇಷವಾಗಿ ಅಧ್ಯಯನ ನಡೆಸಲಾಗುತ್ತದೆ. ಅಲ್ಲಿನ ಸಮೀಕ್ಷೆಯ ಪ್ರಕಾರ ಧರ್ಮದ ಆಫೀಮು ಮೆದ್ದು ಭಯೋತ್ಪಾದನೆಗೆ ತೊಡಗುವವರ ಸಂಖ್ಯೆಗಿಂತ ಬಡತನ ಮತ್ತು ಕುಟುಂಬದ ವಾತ್ಸಲ್ಯದಿಂದ ವಂಚಿತರಾಗಿ ಭಯೋತ್ಪಾದನೆಗೆ ಇಳಿಯುವ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಮ್ಮ ದೇಶದಲ್ಲಿಯೇ ಕಾರಣಗಳಿಂದ ಜನ್ಮ ಕಾಲದಲ್ಲಿಯೇ ಅನಾಥರಾಗಿ ದತ್ತು ತೆಗೆದುಕೊಳ್ಳುವವರಿಲ್ಲದೆ ಈಗ ಉದ್ದೇಶ ರಹಿತರಾಗಿ ದಂಡವಾಗುತ್ತಿರುವ ಬದುಕನ್ನು ದೂಡುತ್ತಿರುವವರು ಲಕ್ಷದಲ್ಲಿ ಇದ್ದಾರೆ. ಮುಂದಿನ ಕೆಲವು ಪೀಳಿಗೆಗಳೂ ಇದೇ ಹಾದಿಯಲ್ಲಿ ಇರುವುದು ದುರಂತ.

ವೈದ್ಯಕೀಯ ಕ್ಷೇತ್ರ ಪರಿಣಿತರು ಗರ್ಭಧಾರಿಗೂ ಮಗುವಿಗೂ ಯಾವುದೇ ಆರೋಗ್ಯ ಸಮಸ್ಯೆ ಆಗಲಾರದು ಎನ್ನುವ ಕಾರಣಕ್ಕೆ ಬಾಡಿಗೆ ತಾಯ್ತನಕ್ಕೆ ಹಸಿರು ನಿಶಾನೆ ತೋರಿದೆ. ವಿದೇಶಗಳಲ್ಲಿ ಈಗಾಗಲೇ ಕಾನೂನುಬದ್ದವಾಗಿ ಜಾರಿಯಲ್ಲಿ ಜಾರಿಯಲ್ಲಿದೆ ಎನ್ನುವ ಕಾರಣಕ್ಕೆ ಮುಂದೊಮ್ಮೆ ನಮ್ಮ ನ್ಯಾಯಾಂಗವೂ ಇದಕ್ಕೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ.

ಇತರೆ ದೇಶಗಳಿಂದ ಬಾಡಿಗೆ ತಾಯ್ತನದ ಸವಲತ್ತನ್ನು ಪಡೆದುಕೊಳ್ಳಲು ಇಲ್ಲಿಗೆ ಒಲಿದು ಬರುವ ಅನುಕೂಲಸ್ಥರಿಂದ ದೇಶದ ಬೊಕ್ಕಸಕ್ಕೆ ಹರಿದು ಬರುವ ಲಾಭವು, ಸರಕಾರವೂ ಈ ಉದ್ದಿಮೆಯನ್ನು ಚಪ್ಪಾಳೆ ತಟ್ಟಿ ಸ್ವಾಗತಿಸುವಂತೆ ಮಾಡಬಹುದು. ಹಾಗೆ ಹುಟ್ಟಿದ ಮಕ್ಕಳ ಪೌರತ್ವ, ಆಸ್ತಿ ಹಕ್ಕು, ಮದುವೆಯ ಪರಿಧಿ, ವರ್ಣತಂತುಗಳ ಪಲ್ಲಟ ಹೀಗೆ ಉದ್ಭವಿಸಬಹುದಾದ ಹಲವಾರು ಸವಾಲುಗಳಿಗೆ ನಾಗರಿಕ ಸಮಾಜ ಉತ್ತರವಾಗಿ ನಿಂತು ಬೆನ್ನು ತಟ್ಟಿಕೊಳ್ಳಬಹುದು.

ಆದರೆ ಈ ಎಲ್ಲಾ ಭ್ರಮಾಯಶಸ್ಸುಗಳೊಂದಿಗೆ ಮನುಕುಲವನ್ನೇ ಆಪೋಶನ ತೆಗೆದುಕೊಳ್ಳಬಹುದಾದಷ್ಟು ಅಗಾಧತೆಯಲ್ಲಿ ಬೆಳೆದು ನಿಲ್ಲುವ ಅನಾಥ ಮಕ್ಕಳಿಗೆ ಉತ್ತರದಾಯಿಗಳು ಯಾರು?

ಸಂತಾನವನ್ನು ಹೊಂದುವುದು ಎಂದರೆ ನಮ್ಮದೇ ಅಂಡಾಣು ಮತ್ತು ವೀರ್ಯಾಣುವಿನ ನಿರಂತರತೆಯನ್ನು ಸ್ಥಾಪಿಸುವುದು ಎನ್ನುವ ಅರ್ಥವೇ? ನಮ್ಮ ಮಾನಸಿಕ ಸಾಮರ್ಥ್ಯದಿಂದ ಪ್ರಬುದ್ಧವಾದ, ಸಹ್ಯ ಸಮಾಜವನ್ನು ರೂಪಿಸುವುದು ನಿಜಾರ್ಥದಲ್ಲಿ ತಾಯ್ತನ. ನೆನಪಿರಲಿ ತಾಯಿಯೆಂದರೆ ಅಪ್ಪನ ರೂಪದ ಗಂಡಸೂ ಕೂಡ.

ಬಾಡಿಗೆ ತಾಯ್ತನವೆನ್ನುವ ಉದ್ದಿಮೆಯನ್ನು ತಮ್ಮ ಅಹಂತಣಿಸುವಿಕೆಗಾಗಿ ಬೆಳೆಸುತ್ತಿರುವ ಕರಣ್ ಜೋಹರ್, ತುಷಾರ್ ಕಪೂರ್, ಶಾರುಖ್ ಖಾನ್ ಎನ್ನುವ ನಿರ್ವಿಣ್ಣರಿಗಿಂತ ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಆಂತರಿಕ ಸೌಂದರ್ಯದಿಂದ ಮಿರಮಿರ ಮಿಂಚುತ್ತಿರುವ ಸುಶ್ಮಿತಾ ಸೇನ್, ರವೀನಾ ಟಂಡನ್ ಗಳು ನಮಗೆ ಮಾದರಿಯಾಗಬೇಕು. ಏಂಜಲಿನಾ ಜೋಲಿಯ ಒಂದು ನೋಟಕ್ಕೆ ಜೋಲಿ ಹೊಡೆಯುವ ನಮ್ಮ ಗಂಡಸರೂ ಅವಳಂತೆ ಮಕ್ಕಳನ್ನು ದತ್ತು ತೆಗೆದುಕೊಂಡು ಪೌರುಷ ಮೆರೆದರೆ ಅವಳೂ ಮೆಚ್ಚದಿರಳು.

ಹಣದ ಅವಶ್ಯಕತೆಗಾಗಿಯೋ ಲಾಲಸೆಯಿಂದಲೋ
ಕುಟುಂಬದವರೇ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಬಾಡಿಗೆ ತಾಯಾಗುವಂತೆ ಬಲವಂತ ಪಡಿಸಬಹುದಾದ ಸಾಧ್ಯತೆಯನ್ನು ಯಾವ ಆಧಾರದ ಮೇಲೂ ತಳ್ಳಿ ಹಾಕುವಂತಿಲ್ಲ. ಅಲ್ಲಿಗೆ ತಾಯ್ತನ ಎನ್ನುವುದು ಬಾಡಿಗೆ ರೂಪದಲ್ಲಿ ಮಹಿಳೆಯರ ಮೇಲಿನ ಮತ್ತೊಂದು ದೌರ್ಜನ್ಯವಾಗುವುದು ನಿಸ್ಸಂಶಯ.

ಒಂದು ಕಾಲದಲ್ಲಿ ಗಂಡು ಮಗನಿಂದಲೇ ಮೋಕ್ಷ ಎಂದು ಸಾರುತ್ತಿದ್ದ ಜ್ಯೋತಿಷಿಗಳು ಇಂದು ಕಾಲಕ್ಕೆ ತಕ್ಕ ಹೆಜ್ಜೆ ಹಾಕುತ್ತಾ ಮಾಧ್ಯಮಗಳಲ್ಲಿ ಕುಳಿತು ಹೆಣ್ಣಾಗಲೀ ಗಂಡಾಗಲಿ ನಮ್ಮದೇ ಮಕ್ಕಳಿಂದ ಮೋಕ್ಷ ಎನ್ನುವಷ್ಟು ನುಣುಪಾಗಿದ್ದಾರೆ. ಅಂದರೆ ಇದರರ್ಥ ಕಾಲಕ್ಕೆ ಹೊಂದಿಕೊಳ್ಳದ ಶಾಸ್ತ್ರಗಳನ್ನು ನವೀಕರಿಸಿಕೊಳ್ಳುತ್ತಿರಬೇಕು ಎಂದು ತಾನೆ? ನಾವುಗಳು ಯಾಕಾಗಿ ಅದನ್ನು 'ಮಕ್ಕಳನ್ನು ದತ್ತು ಪಡೆದುಕೊಳ್ಳುವುದೇ ಮೋಕ್ಷಕ್ಕೆ ದಾರಿ' ಎಂದು ನಂಬಿಕೆಯನ್ನು ಊರ್ಧ್ವಮುಖಿಯನ್ನಾಗಿಸಬಾರದು!

ಮಗು ಎಂದರೆ ಅದು ನನ್ನದೂ ಅಲ್ಲ ನಿನ್ನದೂ ಅಲ್ಲ. ಅದು ಪ್ರಕೃತಿಯ ಕಲೆಗಾರಿಕೆ ಅಷ್ಟೇ. ಮಗು ಎಂದರೆ ವಂಶವೊಂದರ ಹಕ್ಕು ಸ್ಥಾಪಿಸುವ ಸ್ಥಾಪಿಸುವ ವೇದಿಕೆಯಲ್ಲ, ಮಗು ಎಂದರೆ ನಮ್ಮ ರಕ್ತದ ಗುಂಪಿನ ಮೊಹರು ಹೊಡೆದುಕೊಂಡು ಜಗತ್ತಿಗೆ ನಮ್ಮ ಇರುವಿಕೆಯನ್ನು ಸಾರಬೇಕಾದ ಅಂಚೆ ಪೆಟ್ಟಿಗೆಯಲ್ಲ. ಅದೊಂದು ಪರಿಮಳ ಮಾತ್ರ. ಆ ಘಮ ನಾ ಬೆಳೆದ ಗಿಡದಲ್ಲಿ ಅರಳುವ ಹೂವಿನದ್ದೇ ಆಗಿರಬೇಕು ಎನ್ನುವ ಮನೋಭಾವ ನಮ್ಮ ಹೃದಯವಿಕಲತೆಯನ್ನು ಮಾತ್ರ ತೋರುವುದು.

ಈ ಭೂಮಂಡಲವನ್ನು ಮುಂದಿನ ಪೀಳಿಗೆಗಳು ಬಾಳುವಂತಹ ಸ್ಥಿತಿಯಲ್ಲಿ ಬಿಟ್ಟು ಹೋಗಬೇಕೆಂದರೆ ಈಗಾಗಲೇ ಕಾಡುತ್ತಿರುವ ಅನೇಕ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಅವುಗಳ ಸಮೂಹಕ್ಕೆ ಬಾಡಿಗೆ ತಾಯ್ತನ ಎನ್ನುವ ಹೊಸ ಭೂತವನ್ನು ಹಾಕುವುದು ಉಚಿತವೇ? ಹೊಸ ಅವಿಷ್ಕಾರವಾಗಿದೆ ಎನ್ನುವ ಏಕೈಕ ಕಾರಣಕ್ಕೆ ಮನಸ್ಸುಗಳನ್ನು ಕೃಪಣಗೊಳಿಸುವ, ಮನುಷ್ಯನನ್ನು ದ್ವೀಪವನ್ನಾಗಿಸುವ ಇಂತಹ ಪ್ರಯೋಗಗಳ ಬಳಕೆಗಿಂತ ನಮ್ಮನ್ನು ಎಲ್ಲವನ್ನೂ ಒಳಗೊಳ್ಳುವ ಬಯಲಿನಂತಾಗಿಸುವ ದತ್ತುಕ್ರಿಯೆಗೆ ಮನಸ್ಸು ಒಲಿಯಲಿ. ಮಮತೆಗಾಗಿ ಕಾತರಿಸುತ್ತಿರುವ ಮಕ್ಕಳ ಬಾಳು ಹಸನಾಗಲಿ.

Comments

Post a Comment

Popular posts from this blog

ಆತ್ಮಹತ್ಯೆ ಬೆದರಿಕೆ - Law Point

ಸವಾಲು ದಾಟುವ ಸಂಭ್ರಮ in VK

Police Notice in ಪ್ರಜಾವಾಣಿ