ಇಂದಿನ ಆಂದೋಲನ ಪತ್ರಿಕೆಯಲ್ಲಿ ....
17th November  2019
#UNCRC30
ಗುಬ್ಬಚ್ಚಿ ದೇಹದ ಒಂಭತ್ತರ ಹರೆಯದ ಅವಳು ನನ್ನ ಮುಂದೆ ಕುಳಿತಾಗ ಆತಂಕದ ಮುಖದಲ್ಲಿ ಸಣ್ಣಗೆ ಅಳುತ್ತಿದ್ದಳು, ಭಯದಿಂದ ಸ್ವಲ್ಪವೇ ನಡುಗುತ್ತಿದ್ದಳು. ಏನಾಯ್ತು ಮಗು ಎನ್ನುತ್ತಾ  ಅವಳ ಹತ್ತಿರ ಹೋದಾಗ ಅವಳ ಉಸಿರು ನಿಲ್ಲುತ್ತದೆಯೇನೋ ಎನ್ನಿಸಿತು. ಅದು ಆ ದಿನದ ಮೊದಲ ಕೇಸ್.
ಮಕ್ಕಳ ಸಹಾಯವಾಣಿಯವರು ತಮಗೆ ಬಂದ ಕರೆಯನ್ನು ಆಧರಿಸಿ ಯಾರದ್ದೋ ಮನೆಯಲ್ಲಿ ಮನೆಗೆಲಸಕ್ಕೆ ಇದ್ದ ಸಲ್ಮಾಳನ್ನು ರಕ್ಷಿಸಿ ಹೀಗೆ ಇಲ್ಲಿ ಕರೆತಂದಿದ್ದರು.
ಅವಳ ಕತ್ತು ಹಣೆಯ ಮೇಲೆ ಬಾಯ್ದೆರೆದು ನಿಂತ್ತಿದ್ದ ಗಾಯಗಳಲ್ಲಿ ನನ್ನ ರಕ್ತ ಕುದಿಯುತಿತ್ತು. ಬಾಲ ಕಾರ್ಮಿಕ ನಿಷೇಧ ಕಾನೂನಿನ ಅಡಿಯಲ್ಲಿ ದೂರು ದಾಖಲಿಸಲು ವೈದ್ಯಕೀಯ ಪರೀಕ್ಷೆ ಮಾಡಿಸಬೇಕಿತ್ತು.
ಸಲ್ಮಾಳನ್ನು ಸಮಾಧಾನ ಪಡಿಸಿ ವೈದ್ಯರ ಬಳಿ ಕಳುಹಿಸಿದ್ದಾಯ್ತು. ಹತ್ತೇ ನಿಮಿಷದಲ್ಲಿ ಮೊಬೈಲ್ ರಿಂಗುಣಿಸಿತು. ಅತ್ತ ಕಡೆಯಿಂದ ಡಾಕ್ಟರ್ ’ಏನು ಮೇಡಮ್ ಇದು, ಯಾವ ರಾಕ್ಷಸರ ಮನೆಯಲ್ಲಿ ಇತ್ತು ಈ ಮಗು? ಛೇ, ನನಗೇ ತಡೆದುಕೊಳ್ಳಲು ಆಗುತ್ತಿಲ್ಲ” ಎಂದು ಖಿನ್ನರಾಗಿದ್ದರು. “ನಮ್ಮ ವೃತ್ತಿಯಲ್ಲಿ ಇದೆಲ್ಲಾ ಸಾಮಾನ್ಯ ಅಲ್ಲ್ವಾ ಡಾಕ್ಟರ್, ಏನು ಮಾಡೋದು ಹೇಳಿ. ನೀವೊಂದು ರೆಪೋರ್ಟ್ ಮಾಡಿಕೊಟ್ಟರೆ ಈಗಲೇ FIR ಹಾಕಿಸಲಾಗುತ್ತೆ ’ ಎಂದೆ. ಅದಕ್ಕಾತ “ ಬರೀ ಕಂಪ್ಲೇಂಟ್ ಅಲ್ಲ ಮೇಡಮ್ ಅವರನ್ನು ನೇರವಾಗಿ ನೇಣುಗಂಭಕ್ಕೇ ಹಾಕಬೇಕು “ ಎಂದು ಉದ್ವೇಗಗೊಂಡರು. ಆ ಮಗುವಿನ ಮೇಲ್ಭಾಗದ ಶರೀರದ ಮೇಲೆ ೩೨ ಹಸಿ ಗಾಯಗಳು ಇವೆ ಎಂದು ಡಾಕ್ಟರ್ ಹೇಳಿದಾಗ ನನ್ನೊಳಗಿನ ಮನುಷ್ಯ ಇಂಚಿಂಚೇ ಸಾಯುತ್ತಿರುವುದು ಅನುಭವ ಆಯ್ತು. ಮುಂದೆ ಏನು ಹೇಳಲಿ ? ಸಲ್ಮಾ ತನ್ನ ತಂದೆಗೆ  ೧೩ನೆಯ ಮಗಳು ಎನ್ನುವುದೂ ನನ್ನನ್ನು ಅಷ್ಟೇ ಥಣ್ಣಗೆ ಮಾಡಿತ್ತು.
ಇವಳಿಗೆ ೧೧ ವರ್ಷ ವಯಸ್ಸು ಅಷ್ಟೇ. ರಿಂಕಿ ದೂರದ ರಾಜ್ಯದಿಂದ ಮೂರು ವರ್ಷಗಳ ಹಿಂದೆಯೇ ಇಲ್ಲಿಗೆ ಬಂದವಳು. ಉಹುಂ, ಬಂದವಳು ಅಲ್ಲ ಕರೆತಂದವಳು. ಹಾಗೆ ಕರೆತಂದವರು ಯಾರೋ ಅನಾಮಧೇಯರಲ್ಲ. ನಮ್ಮೆಲ್ಲರಿಗೂ ಪರಿಚಯ ಇರುವ ಗಣ್ಯ ವ್ಯಕ್ತಿಗಳೇ ಆಗಿದ್ದರು ಎನ್ನುವುದು ಗಾಯಕ್ಕೆ ಸುರಿದ ಉಪ್ಪಿನಂತೆ. ಇವಳು ಕೂಡ ಮಕ್ಕಳ ಸಹಾಯವಾಣಿಯವರಿಂದ ರಕ್ಷಿಸಲ್ಪಟ್ಟು ನನ್ನ ಮುಂದೆ ಕುಳಿತ್ತಿದ್ದಳು. ಮುದ್ದು ಮುಖದ ಮೇಲೆಲ್ಲಾ ಉಗುರೂರಿದ  ಗುರುತುಗಳು. ಕೆಲವು ನೋವು ಹಂಚಲು ಬಾಯಿ ತೆರೆದುಕೊಂಡಿದ್ದರೆ, ಮತ್ತೆ ಕೆಲವುಗಳು ಅಸಹಾಯಕತೆಯಿಂದ ಅರ್ಧ ಕಣ್ಣು  ಮುಚ್ಚಿದ್ದವು. ಅವಳು ಅಳುತ್ತಿರಲಿಲ್ಲ. ಗಾಬರಿ, ಭಯ ಎಲ್ಲದರಿಂದ ದೂರವಿದ್ದಳು. ಮೂರು ವರ್ಷಗಳ ದಿನಚರಿ ಆಕೆಯ ಭಾವಕೋಶಗಳನ್ನು ಸ್ಥಬ್ಧ ಗೊಳಿಸಿದ್ದವೇನೋ?!
ತಳಮಳವನ್ನು ಒಳಗೆ ತಳ್ಳುತ್ತಾ ಅವಳೊಡನೆ ಮಾತನಾಡಿದೆ. ಮಕ್ಕಳನ್ನು ಹೆರುವುದಷ್ಟೇ ತಮ್ಮ ಕೆಲಸ ಎಂದುಕೊಂಡ ಗಂಡು ಹೆಣ್ಣುಗಳು ಇವಳ ತಾಯ್ತಂದೆಯರಾಗಿದ್ದರು. ಒಂಭತ್ತು ಮಕ್ಕಳೂ ಹೀಗೆ ಎಲ್ಲೆಲ್ಲೋ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು. ಹೆತ್ತವರು  ಕುಡಿದು ಅಮಲಿನಲ್ಲಿ ರಾಜಕಾರಣಿಯೊಬ್ಬರಿಗೆ ಜೈಕಾರ ಹಾಕುವ ಕೆಲಸ ಮಾಡುತ್ತಿದ್ದರು. ಅದಕ್ಕೇ ಆ ಹುಡುಗಿ  ಹೀಗೆ ಇಲ್ಲಿ. ಎರಡು ಹೊತ್ತಿನ ಊಟ ಕೊಟ್ಟರೆ ತಾನು ಎಲ್ಲಿ ಬೇಕಾದರೂ ಇರುತ್ತೇನೆ ಎಂದವಳು ಭೂಮಿಗೆ ಬಂದು ಕೇವಲ ಹನ್ನೊಂದು ವರ್ಷಳು ಎನ್ನುವುದು ನನ್ನನ್ನು ವಿಪರೀತ ಘಾಸಿಗೊಳಿಸಿತ್ತು.
ಹೌದು, ಬಾಲ ಕಾರ್ಮಿಕ ಪದ್ಧತಿ ಬಲು ಕೆಟ್ಟದ್ದು. ಅದರ ನಿಷೇಧಕ್ಕಾಗಿ ಕಾನೂನು ಬಂದಿದೆ. ಅಲ್ಲಿ ಇಲ್ಲಿ ಹೋರಾಟ ಮಾಡುತ್ತಿರುವ ಸಂಘಟನೆಗಳ ಕೂಗು ಪತ್ರಿಕೆಗಳಲ್ಲಿ ಕಂಡಿದ್ದೇವೆ, ದೃಶ್ಯ ಮಾಧ್ಯಮಗಳಲ್ಲಿ ಕೇಳಿದ್ದೇವೆ. ಅದಕ್ಕೇ ಗ್ಯಾರೇಜುಗಳಲ್ಲಿ, ಹೋಟೆಲು ಅಂಗಡಿಗಳಲ್ಲಿ ಬಾಲ ಕಾರ್ಮಿಕರು ಕಾಣುತ್ತಿಲ್ಲ ಎಂದುಕೊಂಡು ನಾಗರಿಕರಂತೆ ಬದುಕುತ್ತಿದ್ದೇವೆ. ಬಚ್ಚಿಟ್ಟುಕೊಂಡ ಹಿಂಸಾತ್ಮಕ ಸತ್ಯವನ್ನು ಸಲ್ಮಾ, ರಿಂಕಿಯ ರೂಪದಲ್ಲಿ ನಿತ್ಯವೂ ಕಾಣುತ್ತಿದ್ದರೂ ’ ಅಯ್ಯೋ ಪಾಪ’ ಎನ್ನುವ ಉದ್ಗಾರದಿಂದ ಆಚೆಗೆ ಕೊಂಡೊಯ್ಯಲು ಸೋಲುತ್ತಿದ್ದೇವೆ.
ಈ ವರ್ಷ ೨೦ ನವೆಂಬರ್ ದಿನಕ್ಕೆ ನಮ್ಮ ದೇಶ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಹಾಕಿ ಮೂವತ್ತು ವರ್ಷಗಳು.
ಈ ದಿನದಲ್ಲೂ ಹುಟ್ಟುವ ಸಾವಿರ ಮಕ್ಕಳಲ್ಲಿ ೩೯ ಮಕ್ಕಳು ಸಾಯುತ್ತಿದ್ದಾರೆ. ಮಕ್ಕಳಿಂದ ದುಡಿಮೆ ಮಾಡಿಸಬಾರದು ಎನ್ನುತ್ತಾ ೧೯೭೪ರಲ್ಲಿಯೇ ನೀತಿಯೊಂದನ್ನು ರೂಪಿಸಿದ್ದೇವೆ. ಆದರೂ ಪ್ರತೀ ಪಕ್ಕದ ಮನೆಯಲ್ಲಿಯೂ ಅವಿತುಕೊಂಡು ಕುಳಿತಿರುವ ಸಲ್ಮ, ರಿಂಕಿಗಳನ್ನು ಕಡೆಗಣಿಸಿ ಮುಂದುವರೆದ ರಾಷ್ಟ್ರ ಎನಿಸಿಕೊಳ್ಳಬೇಕು ಎನ್ನುವ ಆಸೆಯಿಂದ ಕತ್ತಿ, ಮಚ್ಚು ಹಿಡಿಯುವವರೆಗೂ ಹೋಗುತ್ತೇವೆ. ಜಗತ್ತಿನ ಆಗಾಧ ಸಾಧ್ಯತೆಗಳ ಕಡೆಗೆ ಕಣ್ಣು ತೆರೆಯಬೇಕಿರುವ ಭ್ರೂಣವನ್ನು ಉಸಿರುಗಟ್ಟಿಸುತ್ತೇವೆ, ಹಠದಲ್ಲಿ ಹೊರಬಂದವರಿಗೆ ಮೈನೆರೆಯುವ ಮೊದಲೇ ತಾಳಿ ಎನ್ನುವ ನೇಣು ಕುಣಿಕೆ ತೊಡಿಸಿಬಿಡುತ್ತೇವೆ. ನಮ್ಮ ಎಂಜಲು ತಟ್ಟೆಗಳನ್ನು ಉಜ್ಜಲು ಅವರುಗಳ ಕೈಗಳನ್ನು ಬಳಸುತ್ತೇವೆ. ನಮ್ಮ ಕಾಮ ಪ್ರಯೋಗಕ್ಕೆ ಒದಗಿ ಬರುವ ವೇದಿಕೆಯನ್ನಾಗಿಸಿಕೊಂಡಿದ್ದೇವೆ ಅವರುಗಳನ್ನು.  ನಾವು ನಾಗರಿಕರು! 
ಇಷ್ಟೇ ಅಲ್ಲ ಮಕ್ಕಳ ಹಕ್ಕುಗಳ ಸಂಘಗಳನ್ನು ಮಾಡಿದ್ದೇವೆ, ಮಕ್ಕಳ ಗ್ರಾಮಸಭೆಗಳನ್ನು ಮಾಡುತ್ತೇವೆ. ವಿಧಾನ ಸಭೆಯಲ್ಲಿ ಆಗೊಮ್ಮೆ ಈಗೊಮ್ಮೆ ಅವರ ಬಗ್ಗೆ ಗುಸುಗುಸು ಆಗುತ್ತೇವೆ.  ಅವರಿಗೆ ಉಚಿತ ಶಿಕ್ಷಣ ಕೊಡೋಣ ಎನ್ನುತ್ತೇವೆ. ಆದರೆ ಇವುಗಳು ಮನೋರಂಜನೆಗಿಂತ ಮಿಗಿಲಾಗಿ ಬೆಳೆದಿಲ್ಲ ಎನ್ನುವುದನ್ನು ಮರೆಮಾಚುತ್ತೇವೆ. ನಾವು ನಾಗರಿಕರು!
ಮೊನ್ನೆ ೧೪ನೆಯ ತಾರೀಖು ರಾಷ್ತ್ರೀಯ ಮಕ್ಕಳ ದಿನಾಚರಣೆ ಎಂದು ಕ್ಯಾಲೆಂಡರ್ನಲ್ಲಿ ಗುರುತು ಮಾಡಿದ್ದೇವೆ. ೨೦ ನವೆಂಬರ್ ಅಂತರಾಷ್ಟ್ರೀಯ ಮಕ್ಕಳ ದಿನಾಚರಣೆ. ಮಕ್ಕಳ ಹಕ್ಕುಗಳ ವಿಷಯದಲ್ಲಿ ಈ ವರ್ಷಕ್ಕೆ ತನ್ನದೇ ಆದ ಮಹತ್ವ ಇದೆ. ೧೯೫೯ ರ ನವೆಂಬರ್ ೨೦ರಂದು ವಿಶ್ವಸಂಸ್ಥೆಯ ಜೆನೆರಲ್ ಅಸೆಂಬ್ಲಿಯಲ್ಲಿ ಮಕ್ಕಳ ಹಕ್ಕುಗಳ ಘೋಷಣೆ ಮಾಡಿತ್ತು. ನಂತರ ೧೯೮೯ರಲ್ಲಿ  ಹಲವಾರು ರಾಷ್ಟ್ರಗಳು ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಹಾಕಿದವು. ಒಡಂಬಡಿಕೆ ಸಹಿ ಹಾಕಿರುವ ರಾಷ್ಟ್ರಗಳು, ಈ ವರ್ಷ ೧೪ ರಿಂದ ೨೦ನೆಯ ತಾರೀಕಿನವರೆಗೂ ಪ್ರಪಂಚದಾದ್ಯಂತ ಮಕ್ಕಳ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಪ್ರಜ್ಞ್ನೆ  ಮೂಡಿಸಲು ಹಲಾವರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.............
ಬನ್ನಿ ಮಕ್ಕಳ ಹಕ್ಕುಗಳ ಸಪ್ತಾಹದಲ್ಲಿ, ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿಹಾಕಿದ ಮೂವತ್ತು ವರ್ಷಗಳ ಈ ಸಮಯದಲ್ಲಿಯಾದರೂ ಮಕ್ಕಳಿಗಾಗಿ ಮಾತಾಡೋಣ. ಬದುಕಿಗೂ ಅವರಿಗೂ ನಡುವಿನ ಸೇತುವೆಯಾಗೋಣ. ಬನ್ನಿ ಒಮ್ಮೆಯಾದರೂ ಮನುಷ್ಯರಾಗೋಣೊ!

Comments

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್