ಕೊಂಡಿ ಕಳಚುವ ಮುನ್ನ....
ಅವಳು ಹಾಡುತ್ತಿದ್ದದ್ದು ಶುದ್ಧ ದೈವತವೇನು
ಶೃತಿ ಪೆಟ್ಟಿಗೆ ಎಲ್ಲಿ ವೇದಿಕೆಯ ಮೇಲೆ
ಓಹ್ ಇವಳು ತಂಬೂರಿ ಮೀಟಿದವಳಲ್ಲವೆ....

ಕೆಂಪಂಚಿನ ಸೀರೆಯಾಕೆ ದಿನಪತ್ರಿಕೆ ಓದಿದವರಂತೆ
ಇವಳೇ ಅಲ್ಲವೇ ತಂಗಿ - ತಂಗೀ ಎಂದವಳು
ಕಾಲು ಚಾಚದೆಯೇ ಅಕ್ಕನಾದವಳು.....

ಮಡಿ ಹೆಂಗಸಿನ ಮನೆಯ ಸೊಸೆಯಾದವಳು
ವರಳು ಕಲ್ಲಿನಲಿ ಗರಿ ದೋಸೆಯ ಹದ ಕಲಿತವಳು
ಈಗ ಯಾರ ಮಾತೂ ಕೇಳದ ಬೀಗಿತ್ತಿಯ ಹಠದವಳು....

ಮುತ್ತೈದೆ ಸಾವಾಗಲಿ
ಸಾಲಲ್ಲಿ ಗಂಡುಗಳ ಹೆರಲಿ
ಅಲ್ಲುರಿಯುತ್ತಿರುವ ದೀಪಕ್ಕೆ ಮತ್ತೊಬ್ಬಳು ಹೂಬತ್ತಿ  ಹೊಸೆಯುತಿರಲಿ....

ಚಿತ್ರಮಂದಿರ ಭರ್ತಿಯಾಗಿದೆ ಬೋರ್ಡು ಸಿಕ್ಕಿಸಿಯಾರು
ಧಾವಂತದಲ್ಲೇ ಸರತಿಯಲಿ ನಿಲ್ಲುವರು ಬರಿದಾದವರು
ಸಿನೆಮಾ ನೂರು ದಿನ ಓಡಿಸುತ್ತಾರೇನು ಅವರು...

ಮೈಭರ್ತಿ ಹೂವು ಹೊದ್ದವಳ ನೆತ್ತಿಯಲಿ ಬಿಳಿಕೂದಲ ಮುಷ್ಕರ ಇಂದು
ಸದ್ದು - ಮೌನ ಇಬ್ಬರಿಗೂ  ಸಂಬಂಧಿಯಲ್ಲ ಅವಳಿಂದು....
ಅವಳು...ಅವಳು  ಸೋದರತ್ತೆ
ಹೇಳುತ್ತಿದ್ದಾಳೆ ಕೊಂಡಿ ಕಳಚುವ
ಮುನ್ನ ಕೊಂಚ ಮಾತಾಡಿ ಪ್ಲೀಸ್ !

#ಸೋದರತ್ತೆಏನೋಹೇಳುತ್ತಿದ್ದಾಳೆ
07 ಜನವರಿ 2020
10.20 ರಾತ್ರಿ

Photo Taken at Athens, Greece

Comments

Popular posts from this blog

ಆತ್ಮಹತ್ಯೆ ಬೆದರಿಕೆ - Law Point

Police Notice in ಪ್ರಜಾವಾಣಿ

ಸವಾಲು ದಾಟುವ ಸಂಭ್ರಮ in VK