ಇವತ್ತು ಆಂದೋಲನ ಪತ್ರಿಕೆಯಲ್ಲಿ ......

ಜಗದಾಂಬ ನನ್ನಲ್ಲಿಗೆ ಬರಲಾರಂಭಿಸಿ ಮೂರು ವರ್ಷವಾಗಿತ್ತು.  ಸುಭದ್ರ ಸರ್ಕಾರಿ ಕೆಲಸ, ಬದುಕಲು ಬೇಕಾದಷ್ಟು ವಿದ್ಯ್, ಅನುಮಾನದ ಮನಸ್ಸುಗಳನ್ನು ಕಾಡಲಾರದ ವಯಸ್ಸು. ಲಕ್ಷಣವಾದಾಕೆ. ಅವಳಿಗೊಬ್ಬ ಗಂಡ. ವಕೀಲ. ಎಂಟು ಗಂಡಂದಿರು ಅಷ್ಟಪತ್ನಿಯರನ್ನು ಹಿಂಸಿಸುವಷ್ಟು ಇವನೊಬ್ಬನೇ ಅವಳನ್ನು ಕಾಡಿ ಪೀಡಿಸಿದ್ದಾನೆ. ಆಕೆ ಕಚೇರಿಯಿಂದ ಸಾಲ ಪಡೆದು ತೆಗೆದುಕೊಂಡ ಸೈಟು ಅದರಲ್ಲಿ ಕಟ್ಟಿದ ಮನೆ. ಅಲ್ಲೇ ವಾಸ. ಅವನು ರಾತ್ರೊರಾತ್ರಿ ಬೀರುವಿನಿಂದ ಮನೆಯ ದಾಖಲೆ ಪತ್ರಗಳನ್ನು ಲಪಟಾಯಿಸಿಕೊಂಡು ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡು ಮಾರಾಟ ಮಾಡಲು ಗಿರಾಕಿಯನ್ನು ಕರೆತಂದಾಗ ಈಕೆ ನನ್ನಲ್ಲಿಗೆ ಓಡಿ ಬಂದಳು.

ಅದೊಂದು ದಿನ ಅವಳು ಬಂದಾಗ ಕೊರಳು, ಬೆನ್ನು, ಕೈ ಮೇಲೆಲ್ಲಾ ಯಾವ ಬ್ರಾಂಡಿನ ಸಿಗರೇಟು ಅಂತಲೂ ಹೇಳಬಹುದಾದಷ್ಟು ಕಿಡಿ ಗುರುತುಗಳು! ಅವಳ ಮುಖದಲ್ಲಿ ಸ್ವಲ್ಪವೂ ನೋವಿಲ್ಲ. ಇನ್ನೊಂದು ದಿನ ಇವಳಿಂದಲೇ ಅಲಂಕರಿಸಿಕೊಂಡ  ಮಂಚಕ್ಕೆ ಲಲನೆಯೊಡನೆ ಲಗ್ಗೆ ಇಟ್ಟಾಗ ಇವಳೇ ಕೋಣೆಯ  ಕದವಿರಿಸಿ  ಬಂದಿದ್ದಳು.  ನನ್ನ ಬಳಿ ಹೇಳುವಾಗ ಅವಳ ಧ್ವನಿಯಲ್ಲಿ ಯಾವ ಏರಿಳಿತವೂ ಕಾಣದು. ಅವನು ಕುಡಿದ ಅಮಲಿನಲ್ಲಿ ಎಲುಬಿಲ್ಲದ ನಾಲಿಗೆ ಹರಿಬಿಡುವಾಗ ಅಕ್ಕಪಕ್ಕದ ಮನೆಗಳ ಕಿಟಕಿ ತೆರೆ ಸರಿಯುವುದೇ ಇವಳಿಗೆ ಮಾನಭಂಗ.
ಅದಕ್ಕೆ ನಾಗರಭಾವಿಗಿಂತಲೂ ಆಳವಾದ, ಜನ ಮುಟ್ಟದ ಏರಿಯಾದಲ್ಲಿ ಮನೆಮಾಡಿಕೊಂಡು ಅಲ್ಲಿಗೆ ವಾಸದ ಎತ್ತಂಗಡಿ ಇಬ್ಬರದ್ದೂ. ಒಂದಿನ ಗಂಡನು  ಅವಳ ಬರೋಬರಿ ೧೯ ಸೀರೆಗಳನ್ನು ಪಕ್ಕದ ತಿಪ್ಪೆಯಲ್ಲಿಟ್ಟು ಬೆಂಕಿ ಗೀರಿಬಿಟ್ಟ. ಹಾಗಂತ  ಅವಳು ಹೇಳುತ್ತಿದ್ದಾಗ ನಾನು ಅವಳ ಕಣ್ಣಲ್ಲಿ ನೀರು ಹುಡುಕಿ ಸೋತೆ.

ಒಮ್ಮೆ ತನ್ನ ಗೆಳೆಯರೊಂದಿಗೆ ಇವಳನ್ನು ಕೋಣೆಗೆ ದೂಡಿಯೂ ಇದ್ದನಂತೆ ಅವನು. ”ದಂ ಮಾರೋ ದಂ’ ನ ಬ್ರ್ಯಾಂಡ್ ಅಂಬ್ಯಾಸಿಡರ್ ಆದ  ಅವನ ಮದ್ಯಪಾನದ ಚಟ ಬಿಡಿಸಲು ಮಾಡಿದ ಪ್ರಯತ್ನ ಗಗನ ಮೀರಿ ನಿಂತರೂ ಅವನಲ್ಲಿ ಆಗದ ಬದಲಾವಣೆ. ವಕೀಲ ಬುದ್ಧಿ ಪೋಲೀಸ್ ಭಾಷೆ. ಕ್ರೌರ್ಯಕ್ಕೆ ಎಷ್ಟು ಮುಖಗಳು? ಉಹುಂ, ಉತ್ತರ ಗೊತ್ತಿಲ್ಲದಿದ್ದರೆ ಇವನನ್ನೇ ಕೇಳಬೇಕು ಕರಾರುವಕ್ಕು ಸಂಖ್ಯೆ ಸಿಕ್ಕುತ್ತೆ!

ಇಂತಿರ್ಪ್ಪ ಜಗದಾಂಬಳ ಸಂಸಾರವೆಂಬ ಹೊಲದಲ್ಲಿ ಇಟ್ಟ ಬೆದರು ಬೊಂಬೆ ಅವರಿಬ್ಬರ ಹದಿನಾರು ವರ್ಷದ ಏಕೈಕ ಮಗ. ಜೀವನ ಆದ್ಯಂತವಿಲ್ಲದ ಪರೀಕ್ಷೆ ಎನ್ನುವುದಕ್ಕೆ ಇವಳ ಬದುಕಿಗಿಂತ ಬೇರೊಂದು ಉದಾಹರಣೆ ನಾ ಕಾಣೆ, ಕಾರಣವಿಷ್ಟೆ, ಅವಳ ಮಗನಿಗೆ ಹುಟ್ಟಿದಾರಭ್ಯ ಬುದ್ಧಿಮಾಂದ್ಯ. ಪರವೂರಿನ ಅಶ್ರಮವೊಂದರಲ್ಲಿ ಫೀಸು ಕೊಟ್ಟು ಮಗನನ್ನು ಬಿಟ್ಟಿದ್ದಳು. ಅಪ್ಪ ಎಲ್ಲೋ ಓದಿದ್ದನಂತೆ, ಇಂತಹ ಮಕ್ಕಳೊಡನೆ ದೇಹ ಹಂಚಿಕೊಂಡರೆ ಆ ಮಕ್ಕಳು ಸರಿಹೋಗ್ತಾರೆ  ಅಂತ. ಅದಕ್ಕೂ ಪ್ರಯತ್ನಪಟ್ಟ. ತಾಯಿ ಆ ಅನಾಹುತ ತಪ್ಪಿಸಿದಳು. ಅವಳ ತಣ್ಣನೆಯ ವಿವರಣೆಗೆ ನನ್ನ ರಕ್ತ ಕುದಿಯುತ್ತಿತ್ತು.

ಎಲ್ಲಕ್ಕೂ ಪರಿಹಾರ ಹೇಳುತ್ತಾ ಹೋದೆ. ಏನೇ ಹೇಳಿದರೂ  ಆಕೆ “ಅಯ್ಯೋ ಅದು ನನ್ನ ಹಣೆಬರಹ ಪರ್ವಾಗಿಲ್ಲ ಬಿಡಿ. ಯಾರಿಂದ ತಪ್ಪಿಸೋಕಾಗುತ್ತೆ. ಅನುಭವಿಸಲ್ಬೇಕು.” ಅಂತ ಸಮಚಿತ್ತಳಾಗಿ ಹೇಳುತ್ತಿದ್ದಳು.

“ನೋಡಿ ನನಗೆ ಸಂಬಳ ಆಮೇಲೆ ಪೆನ್ಷನ್ ಬರುತ್ತೆ. ಭಿಕ್ಷುಕರಿಗೇ ಸಹಾಯ ಮಾಡ್ತೀವಿ ಇವನನ್ನು ಸಾಕ್ದೆ ಇರ್ತೀನಾ? ಯಾವ ಕಾರಣಕ್ಕೂ ಅವನನ್ನು ಬಿಡಲ್ಲ. ಸಾಯೋವರ್ಗೂ ನೋಡ್ಕೋತೀನಿ. ನಿಮ್ಮಿಂದ ನನಗೆ ಒಂದೇ ಉಪಕಾರ ಆಗ್ಬೇಕು. ಏನಂದ್ರೆ, ನನ್ನ್ಗಂಡ ನನ್ನನ್ನು ಬೀದಿಲಿ ಬೈಯ್ಯಬಾರದು. ಹಾಗ್ಮಾಡಿಕೊಡಿ ಸಾಕು. ಆಮೇಲೆ ನನ್ನ ಮಗ ಬದುಕಿರುವವರೆಗೂ ನನ್ನ ಆಸ್ತಿಯಿಂದ ಅವನ ಜೀವನ ನಡಿಬೇಕು”. ಯಾವಾಗ ಬಂದರೂ ಅವಳು ಕೇಳುತ್ತಿದ್ದದ್ದು, ಹೇಳುತ್ತಿದ್ದದ್ದು ಇಷ್ಟೆ.

ಸಲಹೆ ಕೋರಿ ಬಂದು ಪ್ರತೀ ಬಾರಿ ನನಗೇ ಗೀತಾಶಂಖ ಊದಿ ಹೋಗ್ತಿದ್ದಳು. ಒಮ್ಮೆಯೂ ತನ್ನ ಕಷ್ಟಗಳ ಬಗ್ಗೆ ಗೊಣಗಲಿಲ್ಲ, ಕಣ್ಣೀರು ಹಾಕಲಿಲ್ಲ, ಗಂಡನಿಗೆ ಶಾಪ ಹಾಕಲಿಲ್ಲ, ಅಂಥ ಮಗ ಅಂತ ಪರಿತಪಿಸಲಿಲ್ಲ. ಆತ್ಮಹತ್ಯೆಯ ಬಗ್ಗೆಯಂತೂ ಸುಳಿವೂ ಇಲ್ಲ. ಪರಿಸ್ಥಿತಿಗೆ ತೀರಾ ವ್ಯತಿರಿಕ್ತ ಪ್ರತಿಕ್ರಿಯೆ. ಜಗದಾಂಬ ಬಲು ಗಟ್ಟಿಗಿತ್ತಿ ಅಂದುಕೊಂಡೆ. ಆ ದಿನ ಅವಳು ಹೊರಹೋಗುವಾಗ ಅವಳ ಉದ್ದುದ್ದ ದಷ್ಟಪುಷ್ಟ ಜಡೆ ಅನಾಯಾಸವಾಗಿ ಕಣ್ಣಿಗೆ ಬಿತ್ತು......ವಾಹ್, ಎಷ್ಟು ಚೆನ್ನಾಗಿತ್ತು!

*************************************************************
ವಿಶ್ವಸಂಸ್ಥೆಯ ಸೆಮಿನಾರ‍್ನಲ್ಲಿ“ಹೆಣ್ಣು ಭ್ರೂಣ ಹತ್ಯೆ ಮತ್ತು ಕೌಟುಂಬಿಕ ದೌರ್ಜನ್ಯ” ವಿಷಯದ ಪ್ರಬಂಧ ಮಂಡನೆಗೆ ತಯಾರಾಗುತ್ತಿದ್ದೆ.  ವಾರ್ಡ್ರೋಬ್ ಮುಂದೆ ನಿಂತು ಸೀರೆ ಆಯ್ಕೆ ನಡೆಸಿದ್ದೆ. ಮೊಬೈಲ್ ಹಾಡಿತು. ಮೂರುಬಾರಿ ರಿಂಗಾದ್ಮೇಲೆ “ಹಲೋ” ಅಂದೆ. ಅವಳು ಅಳುತ್ತಿದ್ದಳು. ಮೂರು ವರ್ಷಗಳಲ್ಲಿ  ಮೊದಲ ಅಳು. “ಈಗಲೇ ಸಿಕ್ಕ್ತೀರಾ ಆಫೀಸಿಗೆ ಬರ್ತೀನಿ” ಬಿಕ್ಕುತ್ತಾ ಕೇಳಿದಳು.
“ಇಲ್ಲಮ್ಮ ಇವತ್ತು ನಾನು ಸಿಕ್ಕೋಲ್ಲ....ಅಳು ನಿಲ್ಲ್ಸಿ ಮೊದಲು. ಏನಾಯ್ತು ಹೇಳಿ” ನನ್ನದು ಶೀತಲ ಪ್ರಶ್ನೋತ್ತರ. ಕಣ್ಣೀರಿನ ಸ್ವರ ನಿಲ್ಲುತ್ತಿಲ್ಲ. ನನ್ನ ಫೋನೆಲ್ಲಾ ಒದ್ದೆಯಾಗ್ತಿದೆ. “ಪ್ಲೀಸ್ ಹತ್ತು ನಿಮಿಷದ ಭೇಟಿ ಸಾಕು ಎಷ್ಹೊತ್ತಿಗೆ ಬರಲಿ ಪ್ಲೀಸ್. ಭೇಟಿಯಾಗಲೇ ಬೇಕಾಯ್ತು. ಧಡ್ ಅಂತ ಬಾಗಿಲು ತಳ್ಳಿ ಒಳಬಂದ ಜಗದಾಂಬ ನನ್ನ ಕಾಲ ಬಳಿ ಕುಸಿದು ಒಂದೇ ಸಮನೆ ಅಳುತ್ತಿದ್ದಳು. ಕೈಯಲ್ಲಿ ಒದ್ದೆಯಾದ ಒಂದು ಎನ್ವೆಲೋಪ್ ಹಿಡಿದ್ದಿದ್ದಳು. “ಏನಾಯ್ತು” ಅಂದೆ. ಆಗಲೇ ಅರ್ಧ ಗಂಟೆಯಾಗಿಹೋಗಿತ್ತು. ಅಳು ನಿಂತಿರಲಿಲ್ಲ. “ಇನ್ನು ನಾನ್ಯಾಕೆ ಬದುಕಿರಲಿ” ಅಂದಳುತ್ತಲೇ ನನ್ನ ಕೈಗೆ ಆ ಎನ್ವೆಲೋಪ್ ನೀಡಿದಳು. ತೆರೆದೆ, ನೋಡಿದೆ. ಅದು ಸ್ಟೂಡಿಯೋದಲ್ಲಿ ತೆಗೆಸಿದ ಜಗದಾಂಬಳ ಅಂದಿನ ಫೋಟೊ. ಕಪ್ಪನೆಯ ಬೆಲ್ಟ್ ಇರೋ ವಾಚು ಎಡಗೈಯಲ್ಲಿ. ಕತ್ತರಿಸಿದ ಅವಳ ಉದ್ದ ಜಡೆ ಬಲಗೈಯಲ್ಲಿ! ಓಹ್ ಮೈ ಗಾಡ್, ರಾತ್ರಿಯ ಇವಳ ಗಾಢ ನಿದ್ದೆಯಲ್ಲಿ ಆ ಕಟುಕ ಮಹಾಶಯ ಇವಳ ಜಡೆ ಕತ್ತರಿಸಿಬಿಟ್ಟಿದ್ದ. ಬೆಳಗಿನ ಆಘಾತದಲ್ಲಿ ಪಕ್ಕದ ಮನೆಯವರ ಸಲಹೆಯಂತೆ ಫೋಟೋ ತೆಗೆಸಿಕೊಂಡು  ಸೀದಾ ಇಲ್ಲಿಗೆ ಬಂದಿದ್ದಾಳೆ ಆಕೆ. ಆಗಲೇ ನಾನವಳ ತಲೆ ನೋಡಿದ್ದು. ಅವಳು ಅಳುತ್ತಲೆ ಇದ್ದಳು. “ನಡುನಡುವೆ ನಾನು ಇನ್ನ್ಯಾಕೆ ಬದುಕಿರಲಿ” ಅಂತ ಜೋರಾಗಿ ಕಣ್ಣೀರಾಗುತ್ತಿದ್ದಳು. ಅವಳನ್ನು ಸಮಾಧಾನಗೊಳಿಸುತ್ತಿದ್ದ ಗಡಿಯಾರದ ಮುಳ್ಳು ಮುಂದೋಡುತ್ತಿತ್ತು. ನಾನು ಹೊರಡಲೇಬೇಕಿತ್ತು. ಹೊರಟೆ.

ಮೂರು ವರ್ಷಗಳಿಂದ ಒಮ್ಮೆಯೂ ಅವಳು ಧೈರ್ಯಗೆಟ್ಟಿರಲಿಲ್ಲ. ಅವಳು ನೆಮ್ಮದಿಯಾಗಿರಲು, ಅವನಿಗೆ ಪಾಠ ಕಲಿಸಲು ಏನೆಲ್ಲಾ ಮಾರ್ಗಗಳಿತ್ತು. ಅವಳಿಗೆ ಯಾವುದೂ ಬೇಕಿರಲಿಲ್ಲ. ತಾಳ್ಮೆಯ ವಿಂಧ್ಯ ಪರ್ವತದಂತಿದ್ದಳು. ಆಗಬಾರದ್ದು ಆದಾಗಲೂ ಏನೂ ಆಗಿಯೇಯಿಲ್ಲದಂತ್ತಿದ್ದವಳು, ಜಡೆ ಕಳೆದುಕೊಂಡಿದ್ದಕ್ಕೆ ಸರ್ವಸ್ವವನ್ನೂ ಕಳೆದುಕೊಂಡವಳಂತೆ ಆಗಿದ್ದು ಏಕೆ? ಕೂದಲಿನಲ್ಲಿ ಏನಿದೆ ಅಂಥಾದ್ದು? ಕಟ್ಟಿದ ಮುಡಿಯಲ್ಲಿ ಇರುವುದಾದರೂ ಏನು? ಮುಡಿಹರಿಯಬಿಟ್ಟರೆ ಆಗುವ ಸಾಧನೆ ಏನು? ಹೀಗೆ “ಏನು-ಏಕೆ”ಗಳು ನನ್ನೊಳಗೆ ಏರುತ್ತಿದ್ದವು. ಮುಷ್ಟಿಯೊಳಗಿನ ಕೂದಲಿನ ಗಂಟಿನಂತೆ ಜಗ್ಗುತ್ತಿದ್ದವು. ದ್ರೌಪದಿಯನ್ನೂ ಕೂಗಿಕರೆದೆ. ಉತ್ತರ ಎಲ್ಲಿಂದಲೂ ಬರಲಿಲ್ಲ. ಸಮಾರಂಭದ ಸ್ಥಳ ತಲುಪಿ, ವೇದಿಕೆಯೇರುವ ಮೊದಲು ಕೂದಲನ್ನೊಮ್ಮೆ ಸರಿಮಾಡಿಕೊಂಡೆ. ಮೀಸಲಿದ್ದ ಆಸನದಲ್ಲಿ ಕುಳಿತಾಗ ವಿಷಯವೇ ಮರೆತಂತಾಯ್ತು.

ಬ್ಯೂಟಿ ಪಾರ್ಲರ‍್ಗಳಲ್ಲಿ ಆಸೆಗೆ ತಕ್ಕಂತೆ ಆಕಾರ ತಾಳುತ್ತಾ ಮಿಕ್ಕಂತೆ ನೆಲಕ್ಕುರುಳುವ ಕೂದಲು, ಹರಕೆ ತೀರಲು ಮುಡಿ ಹೋಗುವ ಕೂದಲು,  ಖಾಯಿಲೆಯ ಅನಿವಾರ್ಯತೆಯಲ್ಲಿ ಬರಿದಾಗುವ ಕೂದಲು, ಬಲವಂತದ ಕೇಶ ಮುಂಡನದಲ್ಲಿ ಭರವಸೆಯನ್ನೇ ತ್ಯಜಿಸುವ ಕೂದಲು ಎಲ್ಲವೂ ಟೇಬಲ್ ಮೇಲೆಲ್ಲಾ ಹರಡಿದಂತೆ ಕಾಣುತ್ತಿತ್ತು. ಜಗದಾಂಬಳ ಬಲಗೈಯಲ್ಲಿ ನೇತಾಡುತ್ತಿದ್ದ ಆಕೆಯ ಜಡೆ ನನ್ನ ಹಣೆ ಮೇಲೆ ಬೆವರಾಗಿತ್ತು. ನಿರೂಪಕರು ಹೇಳುತ್ತಿದ್ದರು ’ಈಗ ಪ್ರಬಂಧ ಮಂಡನೆಯ ವಿಷಯ ಹೆಣ್ಣು ಭ್ರೂಣ ಹತ್ಯೆ ಮತ್ತು ಕೌಟುಂಬಿಕ ದೌರ್ಜನ್ಯ’

Comments

Popular posts from this blog

ಆತ್ಮಹತ್ಯೆ ಬೆದರಿಕೆ - Law Point

ಸವಾಲು ದಾಟುವ ಸಂಭ್ರಮ in VK

Police Notice in ಪ್ರಜಾವಾಣಿ