Solo Travel ವಿಜಯಕರ್ನಾಟದಲ್ಲಿ

ಒಬ್ಬಂಟಿ ಪ್ರಯಾಣವೇ ಅತ್ಯದ್ಭುತ ಶಿಕ್ಷಕ. ಅದರಲ್ಲೂ ಪ್ರಯಾಣವು ನಾವು ಬಯಸುವಂತಹ ಪ್ರವಾಸವಾದರೆ ಅನುಭವದ ಅಗಾಧತೆಗೆ ಮಿತಿ ಇಲ್ಲ. ಎಷ್ಟೋ ಬಾರಿ ಒಂಟಿಯಾಗಿ ಪ್ರಯಾಣ ಮಾಡಿದ್ದರೂ, ಸ್ನೇಹಿತರ ಮತ್ತು ಕುಟುಂಬದ ಜೊತೆ ಪ್ರವಾಸ ಹೋದಾಗಲೂ ಸಹ ನನಗಾಗಿ ಸ್ವಲ್ಪ ಸಮಯವನ್ನು ಎತ್ತಿಟ್ಟುಕೊಳ್ಳುತ್ತೇನೆ. ಎಲ್ಲರ ಅಭಿರುಚಿ, ಆಸಕ್ತಿಯು ಒಂದೇ ಆಗಿರುವುದಿಲ್ಲ ಹಾಗಾಗಿ ನನಗೆ ವೈಯಕ್ತಿಕವಾಗಿ ಆಸಕ್ತಿ ಇರುವ ಜಾಗಗಳನ್ನು ನೋಡಲು ವಿಷಯಗಳನ್ನು ತಿಳಿದುಕೊಳ್ಳಲು ಕುಟುಂಬದ ಜೊತೆಯೊಳಗೂ ಸೋಲೋ ಪ್ರವಾಸವೊಂದು ಇದ್ದೇ ಇರುತ್ತದೆ. ಇದಕ್ಕೆ ನಾನಿಟ್ಟ ಹೆಸರು "ಜೊತೆಯೊಳಗೂ ಒಂದು ಸೋಲೋ ಟೈಮ್" .ಇಂತಹ ಒಂದು ಪ್ರವಾಸದಲ್ಲಿ ಸಿಕ್ಕ ಮರೆಯಲಾರದ ನೆನಪು ಎಂದರೆ ಅಲೆಕ್ಸ್ ಎನ್ನುವ ಪೊಲೀಸ್ ಅಧಿಕಾರಿ. ಆತ ಇಂಗ್ಲೆಂಡಿನ ಕೇಂಬ್ರಿಡ್ಜ್ ನಲ್ಲಿ ಪೊಲೀಸ್ ಅಧಿಕಾರಿ. ಮಕ್ಕಳ ಹಕ್ಕುಗಳ ಬಗ್ಗೆ ಪಿ.ಎಚ್‌ಡಿ ಕೂಡ ಮಾಡುತ್ತಿದ್ದರು. ಎಲ್ಲಿ ಹೋದರೂ ಮಕ್ಕಳ ಮತ್ತು ಮಹಿಳೆಯರ ಬಗ್ಗೆ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ತಿಳಿದುಕೊಳ್ಳುವುದು ಅದರ ಬಗ್ಗೆ ಕೆಲಸ ಮಾಡಿದವರನ್ನು, ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡುವುದು, ವೃತ್ತ ಪತ್ರಿಕೆಗಳನ್ನು ಓದುವುದು, ಸ್ಥಳೀಯ ಜನರನ್ನು ಮಾತನಾಡಿಸುವುದು, ಪುಸ್ತಕದಂಗಡಿಗೆ ಹೋಗುವುದು ನನ್ನ ಇಷ್ಟದ ಹವ್ಯಾಸ. ಆ ದಿನ ಲಂಡನ್ನಿನ ಬೀದಿಯಲ್ಲಿ ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿಟ್ಟಿದ್ದ ನವಜಾತ ಶಿಶುವಿನ ವಿಷಯವನ್ನು ಪತ್ರಿಕೆಯಲ್ಲಿ ಓದಿದ್ದೆ. ...