Gandhi in Gadag
ಇಳಿದುಕೊಂಡಿದ್ದ ಅತಿಥಿಗೃಹದಿಂದ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣಕ್ಕೆ ಹತ್ತಿರ ಹತ್ತಿರ ಒಂದೂವರೆ ಕಿಲೋಮೀಟರ್ಗಳ ದೂರ. ಸುತ್ತಲೂ ಕೆಮ್ಮಣ್ಣಿನ ಒಣ ಬಯಲು, ನೆತ್ತಿಯ ಬೈತಲೆಯಂತೆ ಕಡೆದಿದ್ದ ಮಣ್ಣಿನ ಡೊಂಕು ಸಪೂಟು ರಸ್ತೆ. ಹೆಜ್ಜೆಗಳು ನೀರೆತ್ತುವ ಏತದಂತೆ ಏರಬೇಕಿತ್ತು ಅಷ್ಟೇ. ಬೆಂಗಳೂರಿನಲ್ಲಿ ಆಗತಾನೆ ಹುಟ್ಟುತ್ತಿದ್ದ ಸೂರ್ಯ ಅಲ್ಲಾಗಲೇ ಶಾಖವಾಗಿಬಿಟ್ಟಿದ್ದ. ಸೆರಗ ಹೊದ್ದು ಸರಸರನೆ ನಡೆವಾಗ ಸಭಾಂಗಣಕ್ಕೆ ಇಪ್ಪತ್ತು ಹೆಜ್ಜೆ ಮೊದಲೇ ಕಂಡ ಬೋರ್ಡಿನಲ್ಲಿತ್ತು ’ಸಾಬರಮತಿ ಆಶ್ರಮ’. ಹೆತ್ತೂರಿಂದ ವಿದೇಶದವರೆಗೂ ಕಂಡಿದ್ದ ಪುಣ್ಯಾತ್ಮ ಇಲ್ಲೂ ಕಂಡಿದ್ದ. ಆಸಕ್ತಿ ಬಿಸಿಲಿನಂತೆಯೇ ಏರುತ್ತಿತ್ತು. ಕಾರ್ಯಕ್ರಮದ ಸಮಯ ಬಂದಿತ್ತು. ಹಿಂದಿರುಗುವ ಮೊದಲು ಇಲ್ಲಿನ ಗಾಂಧಿಯ ಭೇಟಿ ಆಗಲೇ ಬೇಕು ಎಂದುಕೊಂಡು ಮುಂದೆ ಹೋದೆ. ಆ ದಿನ ಮಕ್ಕಳ ಹಕ್ಕುಗಳ ಗ್ರಾಮಸಭೆ, ಪರಿಣಾಮಕಾರಿ ಆಯೋಜನೆ ಮತ್ತು ಜಾರಿ ಕುರಿತು ಕರ್ನಾಟಕ ರಾಜ್ಯ ಮಟ್ಟದ ಸಮ್ಮೇಳನವನ್ನು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ ಇವರು ಆಯೋಜಿಸಿದ್ದರು. ಉಪಸ್ಥಿತಿಗಾಗಿ ಹೋಗಿದ್ದೆ. ಮಾತುಕತೆಗಳಲ್ಲಿ ಕುಲಪತಿ ಪ್ರೊ.ವಿಷ್ಣುಕಾಂತ್ ಎಸ್ ಚಟಪಲ್ಲಿ ಅವರು “ಬೆಳಗಿನ ಭಜನೆಗೆ ನೀವು ಬರುತ್ತೀರ ಎಂದುಕೊಂಡಿದ್ದೆ” ಎಂದಾಗ ಅಲ್ಲಿನ ಸಾಬರಮತಿಯ ಬಗೆಗಿನ ಕುತೂಹಲ ಮತ...